ಸೋಮವಾರಪೇಟೆ ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಬ್ಯಾಂಕ್ ಶಾಖೆಗೆ ಹೊಂದಿಕೊಂಡಿರುವ ಎಟಿಎಂ ಕೇಂದ್ರದಲ್ಲಿ ಮುಸುಕುಧಾರಿ ಕಳ್ಳರು ಕಳವಿಗೆ ಯತ್ನಿಸಿರುವ ಘಟನೆ ತಾಲೂಕಿನಲ್ಲಿ ಆತಂಕ ಮೂಡಿಸಿದೆ. ಶುಕ್ರವಾರ ತಡರಾತ್ರಿ ಸುಮಾರು 2:05ರ ವೇಳೆಗೆ ಕಾರಿನಲ್ಲಿ ಆಗಮಿಸಿದ ಇಬ್ಬರು ಅಪರಿಚಿತರು ಈ ಕೃತ್ಯಕ್ಕೆ ಕೈಹಾಕಿದ್ದಾರೆ.
ಪೊಲೀಸ್ ಮಾಹಿತಿಯಂತೆ, ಎಟಿಎಂ ಕೇಂದ್ರದೊಳಗೆ ಪ್ರವೇಶಿಸಿದ ದುಷ್ಕರ್ಮಿಗಳು ಕಬ್ಬಿಣದ ಸಲಾಕೆಯನ್ನು ಬಳಸಿ ಎಟಿಎಂ ಯಂತ್ರದ ಮೇಲ್ಭಾಗದ ಕವಚವನ್ನು ಮೀಟಿ ಕಳಚಿದ್ದಾರೆ. ತದನಂತರ ಯಂತ್ರದ ಒಳಗಿನ ನಗದು ಸುರಕ್ಷತಾ ಪದರವನ್ನು ಒಡೆಯಲು ಯತ್ನಿಸುತ್ತಿದ್ದಾಗ, ಹೊರಭಾಗದಲ್ಲಿ ಯಾರೋ ಬರುತ್ತಿದ್ದಾರೆಂಬ ಅನುಮಾನ ವ್ಯಕ್ತವಾಗಿ ಗಾಬರಿಗೊಂಡು ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಎಟಿಎಂ ಒಡೆಯಲು ಕಳ್ಳರು ನಡೆಸಿದ ಕಳವು ಯತ್ನದ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿವೆ. ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಸೋಮವಾರಪೇಟೆ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ತಾಲೂಕಿನ ಪ್ರಮುಖ ರಸ್ತೆಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗೆ ಜಾಲ ಬೀಸಲಾಗಿದೆ.
ಇತ್ತೀಚೆಗೆ ಸೋಮವಾರಪೇಟೆಯ ಬಾಣಾವರ ರಸ್ತೆಯ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಇದೀಗ ಪಟ್ಟಣದ ಮುಖ್ಯ ವ್ಯಾಪಾರಿ ಕೇಂದ್ರವಾದ ಎಂ.ಜಿ. ರಸ್ತೆಯ ಎಟಿಎಂನಲ್ಲೇ ಕಳವು ಯತ್ನ ನಡೆದಿರುವುದು ಸ್ಥಳೀಯ ನಿವಾಸಿಗಳು ಹಾಗೂ ವರ್ತಕರಲ್ಲಿ ಆತಂಕ ಹೆಚ್ಚಿಸಿದೆ. ಬ್ಯಾಂಕ್ ಹಾಗೂ ಎಟಿಎಂ ಕೇಂದ್ರಗಳ ಸುತ್ತಮುತ್ತ ರಾತ್ರಿ ಗಸ್ತು ಹೆಚ್ಚಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.