ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಆರು ಕುಟುಂಬಗಳ 15 ಪ್ರವಾಸಿಗರು ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹ ಮತ್ತು ಭೂಕುಸಿತದ ನಡುವೆಯೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಗಸ್ಟ್ 23 ರಂದು ಬೆಂಗಳೂರಿನಿಂದ ಹೊರಟಿದ್ದ ಈ ತಂಡವು ಗೋರಖ್ಪುರ ಮತ್ತು ಪೋಖರಾ ಮಾರ್ಗವಾಗಿ ಪ್ರಸಿದ್ಧ ಮುಕ್ತಿನಾಥ ದೇವಾಲಯದ ದರ್ಶನ ಪಡೆಯಲು ತೆರಳಿತ್ತು. ಆಗಸ್ಟ್ 25 ರಂದು ದರ್ಶನ ಮುಗಿಸಿ ಹಿಂತಿರುಗುವಾಗ ಮಾರ್ಗಮಧ್ಯೆ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಸಂಚಾರ ಸ್ಥಗಿತಗೊಂಡಿತ್ತು.
ಪ್ರವಾಸಿಗರು ಆಗಸ್ಟ್ 25 ರ ಸಂಜೆ ಏಷ್ಯಾದ ಅತಿ ಎತ್ತರದ ತೂಗುಸೇತುವೆಗಳಲ್ಲಿ ಒಂದಾದ ಕುಷ್ಮಾ ಕೈಯಾ ಸೇತುವೆಯನ್ನು ದಾಟಿದ್ದರು. ಆದರೆ ಮಾರನೇ ದಿನ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಆ ಸೇತುವೆಯು ಭೀಕರ ಪ್ರವಾಹಕ್ಕೆ ಕೊಚ್ಚಿಹೋಯಿತು. ಕಾಠ್ಮಂಡುವಿನಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿದ್ದಾಗ ಭೂಕುಸಿತ ಮತ್ತು ಪ್ರವಾಹದ ಸುದ್ದಿ ತಿಳಿದ ಪ್ರವಾಸಿಗರು ತಕ್ಷಣ ಹಿಂತಿರುಗಿ ಪೋಖರಾ ಬಳಿಯ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದರು.
ರಟ್ಟೀಹಳ್ಳಿ ತಾಲೂಕಿನಲ್ಲಿರುವ ಅವರ ಕುಟುಂಬಸ್ಥರು ಪ್ರಕೃತಿ ವಿಕೋಪದ ಸುದ್ದಿ ಕೇಳಿ ತೀವ್ರ ಆತಂಕಗೊಂಡಿದ್ದರು. ಆದರೆ ಪ್ರವಾಸಿಗರು ಸುರಕ್ಷಿತವಾಗಿರುವ ಸುದ್ದಿ ತಿಳಿದ ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಾವೇರಿ ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಪ್ರವಾಸಿಗರ ಕ್ಷೇಮಸಮಾಚಾರ ವಿಚಾರಿಸಿ ಸಮನ್ವಯ ಸಾಧಿಸಿದರು. ಪ್ರವಾಸಿಗರು ಅಯೋಧ್ಯೆ ಮಾರ್ಗವಾಗಿ ಸುರಕ್ಷಿತವಾಗಿ ಕರ್ನಾಟಕಕ್ಕೆ ಹಿಂತಿರುಗಿದ್ದಾರೆ.