ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ದಿಡುಪೆ (ಕಡಮಗುಂಡಿ) ಜಲಪಾತ ವೀಕ್ಷಣೆಗೆ ಅರಣ್ಯ ಇಲಾಖೆ ಸೆಪ್ಟೆಂಬರ್ 7ರಿಂದ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದೆ. ಮುಂಗಾರು ಮಳೆಯ ಆರ್ಭಟ ಕಡಿಮೆಯಾಗಿ ಹೊಳೆಯ ನೀರಿನ ಹರಿವು ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಜಲಪಾತ ವೀಕ್ಷಣೆಗೆ ವಿಧಿಸಲಾಗಿದ್ದ ತಾತ್ಕಾಲಿಕ ನಿಷೇಧವನ್ನು ಹಿಂಪಡೆಯಲಾಗಿದೆ.
ಆದಾಗ್ಯೂ, ಬೆಳ್ತಂಗಡಿಯ ಮತ್ತೊಂದು ಐತಿಹಾಸಿಕ ಹಾಗೂ ಚಾರಣ ತಾಣವಾದ ಗಡಾಯಿಕಲ್ಲು (ಜಮಾಲಾಬಾದ್ ಕೋಟೆ) ಏರುವಿಕೆಗೆ ವಿಧಿಸಲಾಗಿರುವ ನಿಷೇಧವನ್ನು ಮುಂದುವರಿಸಲಾಗಿದೆ. ಮಳೆಯ ನಂತರ ಗಡಾಯಿಕಲ್ಲಿನ ಕಡಿದಾದ ಬಂಡೆಗಳ ಮೇಲೆ ಪಾಚಿ ಬೆಳೆದು ಜಾರುವ ಅಪಾಯ ಹೆಚ್ಚಿರುವುದರಿಂದ, ಪ್ರವಾಸಿಗರ ಹಾಗೂ ಚಾರಣಿಗರ ಸುರಕ್ಷತೆಯ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ದಿಡುಪೆ ಜಲಪಾತ ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಂಡಿರುವುದು ಉಜಿರೆ ಹಾಗೂ ದಿಡುಪೆ ಸುತ್ತಮುತ್ತಲಿನ ಹೋಂಸ್ಟೇಗಳು, ಸಣ್ಣ ವ್ಯಾಪಾರಿಗಳು ಮತ್ತು ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿರುವ ಸ್ಥಳೀಯರಿಗೆ ಸಂತಸ ತಂದಿದೆ. ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರು ಅರಣ್ಯ ಇಲಾಖೆಯ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ನದಿಯ ಆಳವಾದ ಭಾಗಕ್ಕೆ ಇಳಿಯಬಾರದು ಮತ್ತು ಪರಿಸರ ನೈರ್ಮಲ್ಯವನ್ನು ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.