ಕರ್ನಾಟಕ ಸರ್ಕಾರವು ರಾಜ್ಯದ ವಾಯು ಸಂಚಾರ ಮತ್ತು ತಂತ್ರಜ್ಞಾನ ವ್ಯವಸ್ಥೆಯನ್ನು ಬಲಪಡಿಸಲು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತ್ಯಾಧುನಿಕ ಡ್ರೋನ್ ಪರೀಕ್ಷಾ ಕೇಂದ್ರವನ್ನು (Drone Testing Hub) ಸ್ಥಾಪಿಸಲು ನಿರ್ಧರಿಸಿದೆ. ₹42.8 ಕೋಟಿ ವೆಚ್ಚದ ಈ ಯೋಜನೆಯು ಚಿಂತಾಮಣಿ ತಾಲೂಕಿನ ಜೀಡರಹಳ್ಳಿ ಗ್ರಾಮದ 19.26 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, 'ಡ್ರೋನ್ ಫೆಡರೇಶನ್ ಆಫ್ ಇಂಡಿಯಾ' ಸಹಯೋಗದೊಂದಿಗೆ ಈ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ನೂತನ ಪರೀಕ್ಷಾ ಕೇಂದ್ರವು ಪ್ರತ್ಯೇಕ ರನ್ವೇಗಳು, ಪ್ರತ್ಯೇಕ ವಾಯುಪ್ರದೇಶ ಮತ್ತು ಸುಧಾರಿತ ಡ್ರೋನ್ ತಂತ್ರಜ್ಞಾನಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹೊಂದಿರಲಿದೆ. ಮುಖ್ಯವಾಗಿ ದೃಷ್ಟಿಮಿತಿಯಾಚೆಗೆ (Beyond Visual Line of Sight - BVLOS) ಡ್ರೋನ್ ಹಾರಾಟ ನಡೆಸುವುದು, ಸುದೀರ್ಘ ಹಾರಾಟ ಸಾಮರ್ಥ್ಯ ಪರೀಕ್ಷಿಸುವುದು, ಭದ್ರತಾ ತಪಾಸಣೆ ಹಾಗೂ ಪ್ರಮಾಣೀಕರಣ ಪ್ರಕ್ರಿಯೆಗಳನ್ನು ಇಲ್ಲಿ ನಡೆಸಲಾಗುತ್ತದೆ. ಕೃಷಿ, ಸರಕು ಸಾಗಣೆ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಸ್ವಾಯತ್ತ ಡ್ರೋನ್ಗಳ ಬಳಕೆ ಹೆಚ್ಚಿಸಲು ಈ ಸೌಲಭ್ಯ ಪ್ರಮುಖ ಪಾತ್ರ ವಹಿಸಲಿದೆ.
ಸ್ಟಾರ್ಟ್ಅಪ್ಗಳು, ತಯಾರಕರು, ಸಂಶೋಧಕರು ಮತ್ತು ರಕ್ಷಣಾ ಕ್ಷೇತ್ರದ ಬಳಕೆದಾರರಿಗೆ ಈ ಕೇಂದ್ರವು ತಮ್ಮ ಆವಿಷ್ಕಾರಗಳನ್ನು ಪ್ರಯೋಗಾಲಯದಿಂದ ವಾಣಿಜ್ಯ ಬಳಕೆಗೆ ಕೊಂಡೊಯ್ಯಲು ನೆರವಾಗಲಿದೆ. ರಾಜ್ಯದಲ್ಲಿ ಡ್ರೋನ್ ತಂತ್ರಜ್ಞಾನ ಆವಿಷ್ಕಾರಗಳನ್ನು ಉತ್ತೇಜಿಸುವ ಮೂಲಕ ಕರ್ನಾಟಕವನ್ನು ದೇಶದ ಪ್ರಮುಖ ಏರಿಯಲ್ ಮೊಬಿಲಿಟಿ ಹಬ್ ಆಗಿ ರೂಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.