ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಐತಿಹಾಸಿಕ ಕಿಲ್ಲಾ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕಾಗಿ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಸುಮಾರು 360 ಪುರಾತನ ತಾಮ್ರದ ನಾಣ್ಯಗಳು ಪತ್ತೆಯಾಗಿವೆ. ಮಣ್ಣಿನ ಗಡಿಗೆಯಲ್ಲಿದ್ದ ಈ ನಾಣ್ಯಗಳ ಮೇಲೆ ಉರ್ದು, ಪರ್ಷಿಯನ್ ಹಾಗೂ ಅರೇಬಿಕ್ ಲಿಪಿಯ ಬರಹಗಳಿದ್ದು, ಇವು ಬಹಮನಿ ಸುಲ್ತಾನರ ಅಥವಾ ವಿಜಯನಗರ ಸಾಮ್ರಾಜ್ಯದ ಕಾಲಮಾನಕ್ಕೆ ಸೇರಿದ ಅಪರೂಪದ ನಾಣ್ಯಗಳಾಗಿರಬಹುದು ಎಂದು ಸ್ಥಳೀಯ ಇತಿಹಾಸ ಪ್ರಿಯರು ಅಂದಾಜಿಸಿದ್ದಾರೆ.
ಮನೆಯ ಜಾಗದಲ್ಲಿ ನಾಣ್ಯಗಳ ನಿಧಿ ದೊರೆತ ವಿಷಯ ತಿಳಿಯುತ್ತಿದ್ದಂತೆ ಮಾನ್ವಿ ತಹಸೀಲ್ದಾರ್ ಭೀಮರಾಯ ಬಿ. ರಾಮಸಮುದ್ರ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಬಿ.ದೇವಮಾನೆ, ಕಂದಾಯ ನಿರೀಕ್ಷಕ ಚರಣಸಿಂಗ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಆಡಳಿತದ ಅಧಿಕಾರಿಗಳು ಮನೆ ಮಾಲೀಕರಿಂದ ಎಲ್ಲ 360 ತಾಮ್ರದ ನಾಣ್ಯಗಳನ್ನು ಅಧಿಕೃತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ವಶಪಡಿಸಿಕೊಂಡ ನಾಣ್ಯಗಳನ್ನು ಕಾನೂನು ನಿಯಮಾವಳಿಗಳಂತೆ ಪೊಲೀಸ್ ಇಲಾಖೆಯ ಸುಪರ್ದಿಗೆ ನೀಡಲಾಗಿದ್ದು, ನಾಣ್ಯಗಳ ನಿಖರ ಕಾಲಮಾನ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಪತ್ತೆಹಚ್ಚಲು ರಾಜ್ಯ ಪುರಾತತ್ವ ಇಲಾಖೆಗೆ ಕಳುಹಿಸಿಕೊಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಮಾನ್ವಿ ಕೋಟೆ ಪರಿಸರದಲ್ಲಿ ಈ ಪುರಾತನ ನಾಣ್ಯಗಳು ಪತ್ತೆಯಾಗಿರುವುದು ತಾಲೂಕಿನ ಸಾರ್ವಜನಿಕರಲ್ಲಿ ಹಾಗೂ ಇತಿಹಾಸ ಆಸಕ್ತರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಪವಿತ್ರ ಧಾರ್ಮಿಕ ಕ್ಷೇತ್ರ ವರವಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಮೌನೇಶ್ವರ ರಥೋತ್ಸವವು ಸಂಭ್ರಮ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.