ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪ್ರಸಿದ್ಧ ಪವಿತ್ರ ಧಾರ್ಮಿಕ ಕ್ಷೇತ್ರ ವರವಿಯಲ್ಲಿ ಶ್ರೀ ಜಗದ್ಗುರು ಮೌನೇಶ್ವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಭಕ್ತಿಭಾವದಿಂದ ಜರುಗಿತು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಹರಹರ ಮಹಾದೇವ ಹಾಗೂ ಜಯಘೋಷಗಳೊಂದಿಗೆ ರಥೋತ್ಸವದಲ್ಲಿ ಪಾಲ್ಗೊಂಡು ಕೃಪೆಗೆ ಪಾತ್ರರಾದರು.
ಅಲಂಕೃತ ರಥಕ್ಕೆ ಭಕ್ತರು ಉತ್ತತ್ತಿ ಮತ್ತು ಬಾಳೆಹಣ್ಣುಗಳನ್ನು ತೂರಿ ತಮ್ಮ ಹರಿಕೆ ತೀರಿಸಿದರು. ಬೆಳಿಗ್ಗೆಯಿಂದಲೇ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಮಹಾಯಜ್ಞ, ಧ್ವಜಾರೋಹಣ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಜಾತ್ಯತೀತ ಹಾಗೂ ಧಾರ್ಮಿಕ ಸೌಹಾರ್ದತೆಯ ಪ್ರತೀಕವಾಗಿರುವ ಈ ಕ್ಷೇತ್ರದಲ್ಲಿ ಕೇಸರಿ ಮತ್ತು ಹಸಿರು ಧ್ವಜಗಳನ್ನು ಹಿಡಿದ ಭಕ್ತಸಮೂಹ ಉತ್ಸವದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಬಸ್, ಜೀಪು, ಚಕ್ಕಡಿ ಹಾಗೂ ಸರಕಾರಿ ಉಚಿತ ಸಾರಿಗೆ ಸೌಲಭ್ಯ ಬಳಸಿಕೊಂಡು ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಜನರು ವರವಿಗೆ ಆಗಮಿಸಿದ್ದರು. ಶಿರಹಟ್ಟಿ ತಾಲೂಕಿನ ಜನರಿಗೆ ವರವಿ ಜಾತ್ರೆಯು ಧಾರ್ಮಿಕ ಮಹತ್ವದ ಜೊತೆಗೆ ಸ್ಥಳೀಯ ಸಣ್ಣ ವ್ಯಾಪಾರಿಗಳು ಹಾಗೂ ಸಾರಿಗೆ ಕ್ಷೇತ್ರಕ್ಕೆ ಆರ್ಥಿಕ ಚೇತರಿಕೆ ನೀಡುವ ಪ್ರಮುಖ ವಾರ್ಷಿಕ ಉತ್ಸವವಾಗಿದೆ.
ಹೊಳೆನರಸೀಪುರ ತಾಲೂಕಿನ ಮಳಲಿ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಾಲಯದಲ್ಲಿ ಅರ್ಚಕರ ನಡುವೆ ಸರದಿ ಪೂಜೆ ವಿಚಾರಕ್ಕೆ ಜಟಾಪಟಿ ಉಂಟಾಗಿ ದೇವಾಲಯದ ಬಾಗಿಲು ಮುಚ್ಚಿದ್ದರಿಂದ ಗೊಂದಲ ಉಂಟಾಗಿದ್ದು, ತಹಸೀಲ್ದಾರ್ ಮಧ್ಯಸ್ಥಿಕೆಯಿಂದ ತಾತ್ಕಾಲಿಕವಾಗಿ ಪರಿಹಾರಗೊಂಡಿದೆ.