ಕರ್ನಾಟಕದಲ್ಲಿ ತಲೆದೋರಿರುವ ಭೀಕರ ಬರಗಾಲ ಪರಿಸ್ಥಿತಿ ಮತ್ತು ಪಶ್ಚಿಮ ಘಟ್ಟಗಳ ಇಕೋ-ಸೆನ್ಸಿಟಿವ್ ವಲಯಕ್ಕೆ ಸಂಬಂಧಿಸಿದ ಕಸ್ತೂರಿರಂಗನ್ ವರದಿಯ ಕುರಿತು ವಿಸ್ತೃತವಾಗಿ ಚರ್ಚಿಸಲು ಸೆಪ್ಟೆಂಬರ್ ೨೧ ರಿಂದ ೨೩ ರವರೆಗೆ ಮೂರು ದಿನಗಳ ಕಾಲ ಶಾಸನಸಭೆಯ ವಿಶೇಷ ಅಧಿವೇಶನ ಕರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಂಪುಟ ಸಭೆಯ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಈ ವಿಷಯ ತಿಳಿಸಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಭಾವದಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು, ಬೆಳೆ ಹಾನಿ ಪರಿಶೀಲಿಸಲು ಮತ್ತು ಕೇಂದ್ರ ಸರ್ಕಾರದಿಂದ ಪರಿಹಾರ ಧನ ಕೋರಲು ಶಾಸನಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಜೊತೆಗೆ, ಜಾನುವಾರುಗಳ ಮೇವಿನ ಪೂರೈಕೆಗಾಗಿ ಪಶುಸಂಗೋಪನಾ ಇಲಾಖೆಗೆ ೨೫ ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲು ಸಂಪುಟ ಅನುಮೋದನೆ ನೀಡಿದೆ.
ಇದರ ಜೊತೆಗೆ, ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಡಾ. ಕೆ. ಕಸ್ತೂರಿರಂಗನ್ ಸಮಿತಿ ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯ ಕುರಿತಾಗಿಯೂ ಸುದೀರ್ಘ ಚರ್ಚೆ ನಡೆಯಲಿದೆ. ರಾಜ್ಯದ ೧,೪೩೯ ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಈ ವರದಿಯನ್ನು ಕರ್ನಾಟಕ ಸರ್ಕಾರ ಈಗಾಗಲೇ ಹಲವು ಬಾರಿ ತಿರಸ್ಕರಿಸಿದೆ. ನಿಯಮಿತ ಪ್ರಶ್ನೋತ್ತರ ಕಲಾಪಗಳನ್ನು ಬದಿಗಿಟ್ಟು, ಈ ಎರಡು ಪ್ರಮುಖ ವಿಷಯಗಳ ಮೇಲಷ್ಟೇ ಮೂರು ದಿನಗಳ ಕಾಲ ವಿಶೇಷ ಚರ್ಚೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.