ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ರಾಮನಗರ ಜಿಲ್ಲೆಯ ಜಲಮೂಲಗಳ ಅತಿಕ್ರಮಣ ತೆರವುಗೊಳಿಸುವಲ್ಲಿ ವಿಫಲವಾದ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಾಯುಕ್ತ ನೀಡಿದ್ದ ನಿರ್ದೇಶನದಂತೆ ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ ಹಾಗೂ ಹಾರೋಹಳ್ಳಿ ತಾಲೂಕುಗಳ ಐವರು ತಹಶೀಲ್ದಾರರು ವಿಚಾರಣೆಗೆ ಹಾಜರಾಗಿದ್ದರು.
ವಿಚಾರಣೆ ವೇಳೆ ಸಲ್ಲಿಕೆಯಾದ ವರದಿಗಳನ್ನು ಪರಿಶೀಲಿಸಿದ ಲೋಕಾಯುಕ್ತರು, ಜಿಲ್ಲೆಯಾದ್ಯಂತ ಕೆರೆ ಅತಿಕ್ರಮಣ ತೆರವು ಕಾರ್ಯಾಚರಣೆ ತೀರಾ ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಎತ್ತಿ ತೋರಿಸಿದರು. ಚನ್ನಪಟ್ಟಣ ತಾಲೂಕಿನ 413 ಕೆರೆಗಳ ಪೈಕಿ 207 ಕೆರೆಗಳ ಅತಿಕ್ರಮಣ ಇನ್ನು ತೆರವುಗೊಂಡಿಲ್ಲ. ಹಾರೋಹಳ್ಳಿಯಲ್ಲಿ 115 ಕೆರೆಗಳ ಪೈಕಿ 102 ಕೆರೆಗಳು ಹಾಗೂ ಕನಕಪುರ ತಾಲೂಕಿನ 180 ಅತಿಕ್ರಮಿತ ಕೆರೆಗಳ ಪೈಕಿ 138 ಕೆರೆಗಳ ತೆರವು ಬಾಕಿ ಉಳಿದಿದೆ. ರಾಮನಗರ ತಾಲೂಕಿನಲ್ಲಿ 190 ಅತಿಕ್ರಮಿತ ಕೆರೆಗಳ ಪೈಕಿ ಕೇವಲ 35 ಕೆರೆಗಳನ್ನು ಮಾತ್ರ ಮುಕ್ತಗೊಳಿಸಲಾಗಿದೆ. ಮಾಗಡಿ ತಾಲೂಕಿನಲ್ಲಿ 220 ಕೆರೆಗಳ ಪೈಕಿ 25 ಕೆರೆಗಳ ತೆರವು ಕಾರ್ಯಾಚರಣೆ ಮಾತ್ರ ಬಾಕಿ ಇದ್ದು, ತುಲನಾತ್ಮಕವಾಗಿ ಉತ್ತಮ ಸಾಧನೆ ಕಂಡುಬಂದಿದೆ.
2018 ರಷ್ಟು ಹಳೆಯ ಪ್ರಕರಣಗಳಿದ್ದರೂ ಅಧಿಕಾರಿಗಳು ಗಮನಾರ್ಹ ಪ್ರಗತಿ ಸಾಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಲೋಕಾಯುಕ್ತರು, ಕೆರೆಗಳ ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣ ಅತ್ಯಂತ ಅಗತ್ಯವಾಗಿದೆ ಎಂದು ಎಚ್ಚರಿಸಿದರು. ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ವೇಗಗೊಳಿಸಿ ತಕ್ಷಣವೇ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಕಂದಾಯ ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಿದ್ದಾರೆ.