ಬರಪೀಡಿತ ಚಿತ್ರದುರ್ಗ ಜಿಲ್ಲೆಯ ಜನರ ದಶಕಗಳ ಕನಸು ಕೊನೆಗೂ ನನಸಾಗುವ ಹಂತ ತಲುಪಿದ್ದು, ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಸೆಪ್ಟೆಂಬರ್ 6 ರಿಂದ ಪ್ರಾಯೋಗಿಕವಾಗಿ ನೀರು ಹರಿಸಲು ಸಿದ್ಧತೆ ಪೂರ್ಣಗೊಂಡಿದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ವಿಜೆಎನ್ಎಲ್) ಅಧಿಕಾರಿಗಳು ನೀರು ಹರಿಸಲು ಅಗತ್ಯವಾದ ಎಲ್ಲಾ ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ.
ಈ ಪ್ರಮುಖ ಕಾಲುವೆಯು ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಮತ್ತು ಚಿತ್ರದುರ್ಗ ತಾಲೂಕುಗಳ ಮೂಲಕ ಹಾದುಹೋಗಿ ಗೋನೂರು ಕೆರೆಯನ್ನು ತಲುಪಲಿದೆ. ನಂತರ ನೈಸರ್ಗಿಕ ಹಳ್ಳದ ಮೂಲಕ ಚಳ್ಳಕೆರೆ ತಾಲೂಕಿನ ಐತಿಹಾಸಿಕ ರಾನಿಕೆರೆಗೆ ನೀರು ಹರಿಯಲಿದೆ. ಈ ಬೆಳವಣಿಗೆಯಿಂದಾಗಿ ಮಧ್ಯ ಕರ್ನಾಟಕದ ಬಯಲುಸೀಮೆ ರೈತರು ಮತ್ತು ಸಾರ್ವಜನಿಕರಲ್ಲಿ ಭಾರೀ ಸಂತಸದ ವಾತಾವರಣ ಮೂಡಿದ್ದು, ಕುಡಿಯುವ ನೀರಿನ ಅಭಾವ ತಗ್ಗುವುದರ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿ ಕೃಷಿ ಚಟುವಟಿಕೆಗಳಿಗೆ ಜೀವಕಳೆ ಬರಲಿದೆ.
ಕಾಲುವೆಯಲ್ಲಿ ನೀರು ಹರಿಯುವ ಹಿನ್ನೆಲೆಯಲ್ಲಿ ಯಾವುದೇ ಅಪಾಯ ಸಂಭವಿಸದಂತೆ ವಿಜೆಎನ್ಎಲ್ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಕಾಲುವೆ ಹಾಗೂ ಹಳ್ಳಗಳ ದಂಡೆಯಲ್ಲಿ ಓಡಾಡುವುದು, ಈಜುವುದು, ಜಾನುವಾರುಗಳನ್ನು ಮೇಯಿಸುವುದು ಮತ್ತು ಕಾನೂನುಬಾಹಿರವಾಗಿ ಪಂಪ್ ಸೆಟ್ ಹಾಕಿ ನೀರು ಎತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನೀರಾವರಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.