ಸಾರ್ವಜನಿಕರಿಗೆ ಹಾಗೂ ಕಕ್ಷಿದಾರರಿಗೆ ತ್ವರಿತವಾಗಿ ಕಂದಾಯ ನ್ಯಾಯ ಒದಗಿಸುವ ಮೂಲ ಉದ್ದೇಶದಿಂದ ಹಾಸನ ಜಿಲ್ಲೆಯ ಆಲೂರು ತಾಲೂಕು ಆಡಳಿತ ಸೌಧದಲ್ಲಿ ನೂತನವಾಗಿ ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯದ ಕಲಾಪಗಳನ್ನು ಉದ್ಘಾಟಿಸಲಾಯಿತು. ಉಪ ವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ ಅವರು ಕಚೇರಿ ಕಲಾಪಗಳನ್ನು ನೂತನವಾಗಿ ಚಾಲನೆಗೊಳಿಸಿದರು.
ಆಲೂರು ತಾಲೂಕಿನ ಗಡಿ ಪ್ರದೇಶಗಳ ಗ್ರಾಮಸ್ಥರು ಮತ್ತು ಕಕ್ಷಿದಾರರು ಕಂದಾಯ ಪ್ರಕರಣಗಳ ವಿಚಾರಣೆಗಾಗಿ ಸಕಲೇಶಪುರ ಉಪ ವಿಭಾಗಾಧಿಕಾರಿ ಕಚೇರಿಗೆ ಅಲೆಯಬೇಕಾಗಿತ್ತು. ಇದರಿಂದ ಸಾಕಷ್ಟು ಸಮಯ ಹಾಗೂ ಹಣ ಪೋಲಾಗುತ್ತಿತ್ತು. ಸಾರ್ವಜನಿಕರ ಈ ಸಮಸ್ಯೆಯನ್ನು ಮನಗಂಡು, ಇನ್ಮುಂದೆ ಪ್ರತಿ ಮಂಗಳವಾರ ಆಲೂರು ತಾಲೂಕು ಆಡಳಿತ ಸೌಧದಲ್ಲೇ ಉಪ ವಿಭಾಗಾಧಿಕಾರಿ ನ್ಯಾಯಾಲಯದ ಪ್ರಕರಣಗಳ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಉಪ ವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ, ಕಕ್ಷಿದಾರರ ಸಂಕಷ್ಟ ಅರಿತು ಆಲೂರಿನಲ್ಲೇ ವಿಚಾರಣೆ ನಡೆಸುವುದು ಸ್ಥಳೀಯರಿಗೆ ಅತ್ಯಂತ ಅನುಕೂಲವಾಗಲಿದೆ ಎಂದರು. ತಹಸೀಲ್ದಾರ್ ಎಚ್.ಮಲ್ಲಿಕಾರ್ಜುನ ಮಾತನಾಡಿ, ಮೇಲಾಧಿಕಾರಿಗಳು ವಾರಕ್ಕೊಮ್ಮೆ ತಾಲೂಕು ಕಚೇರಿಗೆ ಬರುವುದರಿಂದ ಸಾರ್ವಜನಿಕ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಕಲೇಶಪುರ ತಹಸೀಲ್ದಾರ್ ಸುಪ್ರಿತಾ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಮಹೇಶ್, ಕಾರ್ಯದರ್ಶಿ ಆರ್.ಬಿ.ಸುರೇಶ್ ಹಾಗೂ ಹಲವು ವಕೀಲರು ಭಾಗವಹಿಸಿದ್ದರು.
ಸೆಷನ್ಸ್ ನ್ಯಾಯಾಧೀಶರ ಮುಂದೆ ದುರ್ವರ್ತನೆ ತೋರಿದ ಪ್ರಕರಣದಲ್ಲಿ ಬಳ್ಳಾರಿಯ ವಕೀಲ ಎಸ್. ರಂಗಸ್ವಾಮಿ ಅವರ ಬೇಷರತ್ ಕ್ಷಮಾಪಣೆಯನ್ನು ಸ್ವೀಕರಿಸಿರುವ ಕರ್ನಾಟಕ ಹೈಕೋರ್ಟ್, ಬಳ್ಳಾರಿಯಲ್ಲಿ 1,000 ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವಂತೆ ವಿನೂತನ ಆದೇಶ ನೀಡಿದೆ.