ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದಲ್ಲಿ ನೂತನವಾಗಿ ಸ್ಥಾಪಿಸಲಾದ ಸಿವಿಲ್ ಹಾಗೂ ಜೆಎಂಎಫ್ಸಿ (ಮೊದಲ ದರ್ಜೆ ನ್ಯಾಯಾಂಗ ದಂಡಾಧಿಕಾರಿ) ನ್ಯಾಯಾಲಯದ ಕಟ್ಟಡವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಶಿವಶಂಕರ ಅಮರಣ್ಣನವರ್ ಅವರು ಅಧಿಕೃತವಾಗಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್, ಸಾರ್ವಜನಿಕರ ಹಕ್ಕುಗಳ ರಕ್ಷಣೆ ಹಾಗೂ ಸಕಾಲದಲ್ಲಿ ಸುಲಭವಾಗಿ ನ್ಯಾಯ ಒದಗಿಸುವುದು ನ್ಯಾಯಾಲಯಗಳ ಮುಖ್ಯ ಉದ್ದೇಶವಾಗಿದೆ ಎಂದರು. ಕಾಳಗಿ ತಾಲೂಕು ಕೇಂದ್ರದಲ್ಲಿ ನೂತನ ನ್ಯಾಯಾಲಯ ಆರಂಭವಾಗಿರುವುದರಿಂದ ಕಾಳಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಪ್ರಕರಣಗಳ ವಿಚಾರಣೆಗಾಗಿ ದೂರದ ಸೇಡಂ, ಚಿತ್ತಾಪುರ ಅಥವಾ ಕಲಬುರಗಿ ನಗರಕ್ಕೆ ತೆರಳುವ ಅನಿವಾರ್ಯತೆ ತಪ್ಪಲಿದ್ದು, ಸ್ಥಳೀಯವಾಗಿಯೇ ತ್ವರಿತ ನ್ಯಾಯಾಂಗ ಸೇವೆಗಳು ದೊರೆಯಲಿವೆ.
ಪ್ರಸ್ತುತ ಈ ನ್ಯಾಯಾಲಯವು ಕಾಳಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸುಸಜ್ಜಿತ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಾರ್ಯಾರಂಭ ಮಾಡಿದ್ದು, ಈ ವ್ಯವಸ್ಥೆಗೆ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅವರ ಶ್ರಮ ಕಾರಣವಾಗಿದೆ. ಇನ್ನು ಶಾಶ್ವತ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕಾಗಿ ದಾನಿ ಶಿವಶರಣಪ್ಪ ಕಮಲಾಪುರ ಅವರು ಮೂರು ಎಕರೆ ಜಮೀನು ಉಚಿತವಾಗಿ ದೇಣಿಗೆ ನೀಡಿದ್ದಾರೆ. ಈ ನೂತನ ನ್ಯಾಯಾಲಯ ಸ್ಥಾಪನೆಯಿಂದ ಕಾಳಗಿ ತಾಲೂಕಿನ ಸಾರ್ವಜನಿಕರು ಹಾಗೂ ವಕೀಲ ಸಮುದಾಯದ ದೀರ್ಘಕಾಲದ ಕನಸು ನನಸಾಗಿದೆ.
ಸೆಷನ್ಸ್ ನ್ಯಾಯಾಧೀಶರ ಮುಂದೆ ದುರ್ವರ್ತನೆ ತೋರಿದ ಪ್ರಕರಣದಲ್ಲಿ ಬಳ್ಳಾರಿಯ ವಕೀಲ ಎಸ್. ರಂಗಸ್ವಾಮಿ ಅವರ ಬೇಷರತ್ ಕ್ಷಮಾಪಣೆಯನ್ನು ಸ್ವೀಕರಿಸಿರುವ ಕರ್ನಾಟಕ ಹೈಕೋರ್ಟ್, ಬಳ್ಳಾರಿಯಲ್ಲಿ 1,000 ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವಂತೆ ವಿನೂತನ ಆದೇಶ ನೀಡಿದೆ.