ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ ಕೃಷಿ ಬಾವಿಯೊಂದರಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರು ಶವವಾಗಿ ಪತ್ತೆಯಾಗಿದ್ದು, ಅವರ ತಂದೆ ನಾಪತ್ತೆಯಾಗಿರುವ ದೂಃಖದ ಘಟನೆ ಬೆಳಕಿಗೆ ಬಂದಿದೆ. ಮೃತ ಬಾಲಕಿಯರನ್ನು ಬಳಬಟ್ಟಿ ಗ್ರಾಮದ ನಿವಾಸಿಗಳಾದ ರಕ್ಷಿತಾ ಬಾರಗಿ (15) ಮತ್ತು ಸಾಕ್ಷಿ ಬಾರಗಿ (10) ಎಂದು ಗುರುತಿಸಲಾಗಿದೆ.
ಬಾಲಕಿಯರ ತಾಯಿ ಲಕ್ಷ್ಮೀಬಾಯಿ ಅವರು ತಮ್ಮ ಇತರ ಮೂವರು ಮಕ್ಕಳೊಂದಿಗೆ ಸಂಬಂಧಿಕರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಂಡು ಮನೆಗೆ ಮರಳಿದಾಗ ಈ ದುರಂತ ಹೊರಬಿದ್ದಿದೆ. ಮನೆಗೆ ಬಂದಾಗ ಪತಿ ಸಬಣ್ಣ ಬಾರಗಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಕಾಣೆಯಾಗಿರುವುದು ಕಂಡುಬಂದಿದೆ. ಆತಂಕಗೊಂಡ ಲಕ್ಷ್ಮೀಬಾಯಿ ಗ್ರಾಮದ ಜಮೀನುಗಳಲ್ಲಿ ಹುಡುಕಾಟ ನಡೆಸಿದಾಗ, ಬಾವಿಯ ದಂಡೆಯ ಮೇಲೆ ಪತಿ ಸಬಣ್ಣನ ಉಡುಪುಗಳು ಪತ್ತೆಯಾಗಿವೆ. ಬಾವಿಯಲ್ಲಿ ಇಣುಕಿ ನೋಡಿದಾಗ ಇಬ್ಬರು ಹೆಣ್ಣುಮಕ್ಕಳ ಮೃತದೇಹಗಳು ನೀರಿನಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ತಕ್ಷಣವೇ ನಿಡಗುಂದಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದಾರೆ. ತಂದೆ ಸಬಣ್ಣ ಕೂಡ ಬಾವಿಗೆ ಹಾರಿರಬಹುದು ಎಂಬ ಶಂಕೆಯಿಂದ ನೀರನ್ನು ಪಂಪ್ ಮೂಲಕ ಸಂಪೂರ್ಣವಾಗಿ ಖಾಲಿ ಮಾಡಿ ಶೋಧ ನಡೆಸಲಾಯಿತಾದರೂ, ಅವರ ಸುಳಿವು ಸಿಗಲಿಲ್ಲ. ಬಳಿಕ ಬಾಲಕಿಯರ ಮೃತದೇಹಗಳನ್ನು ಹೊರತೆಗೆದು ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಘಟನೆಗೆ ಸಂಬಂಧಿಸಿದಂತೆ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಸಬಣ್ಣ ಬಾರಗಿಯವರ ಪತ್ತೆಗೆ ಹಾಗೂ ದುರಂತಕ್ಕೆ ನಿಖರ ಕಾರಣ ತಿಳಿದುಕೊಳ್ಳಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಈ ಘಟನೆಯು ನಿಡಗುಂದಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ತೀವ್ರ ಕಳವಳ ಮೂಡಿಸಿದ್ದು, ಪೊಲೀಸರು ಶೀಘ್ರವೇ ತನಿಖೆ ಪೂರ್ಣಗೊಳಿಸಿ ಸತ್ಯಾಂಶವನ್ನು ಹೊರತರಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸೆಷನ್ಸ್ ನ್ಯಾಯಾಧೀಶರ ಮುಂದೆ ದುರ್ವರ್ತನೆ ತೋರಿದ ಪ್ರಕರಣದಲ್ಲಿ ಬಳ್ಳಾರಿಯ ವಕೀಲ ಎಸ್. ರಂಗಸ್ವಾಮಿ ಅವರ ಬೇಷರತ್ ಕ್ಷಮಾಪಣೆಯನ್ನು ಸ್ವೀಕರಿಸಿರುವ ಕರ್ನಾಟಕ ಹೈಕೋರ್ಟ್, ಬಳ್ಳಾರಿಯಲ್ಲಿ 1,000 ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವಂತೆ ವಿನೂತನ ಆದೇಶ ನೀಡಿದೆ.