ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಈಚನಾಳ ಗ್ರಾಮದ ಹೋಟೆಲ್ ಒಂದರಲ್ಲಿ ನಡೆದ ಅಸ್ಪೃಶ್ಯತೆ ಆಚರಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕನ ವಿರುದ್ಧ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಲಿತ ಗ್ರಾಹಕರೊಬ್ಬರಿಗೆ ಲೋಟದಲ್ಲಿ ಕುಡಿಯುವ ನೀರು ನೀಡದೆ ಮೇಲಿಂದ ಕಾಯ್ದುಕೊಂಡು ನೀರು ಸುರಿಯುತ್ತಿರುವ ದೃಶ್ಯ ವಿಡಿಯೊದಲ್ಲಿದ್ದು, ಇದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ವಿಡಿಯೊ ಹರಿದಾಡಿದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರ ಉಪ್ಪಾರ ಹಾಗೂ ಇಲಾಖೆಯ ಅಧಿಕಾರಿಗಳು ಈಚನಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಮಾತನಾಡುತ್ತಾ, ಘಟನೆ ಕೆಲವು ತಿಂಗಳ ಹಿಂದೆ ನಡೆದಿದ್ದರೂ ಗ್ರಾಮದ ಕೆಲವು ಹೋಟೆಲ್ ಹಾಗೂ ಸಲೂನ್ಗಳಲ್ಲಿ ಇಂತಹ ತಾರತಮ್ಯದ ಆಚರಣೆಗಳು ನಡೆಯುತ್ತಿವೆ ಎಂದು ದೂರಿದ್ದಾರೆ.
ಅಧಿಕಾರಿಗಳು ನೀಡಿದ ದೂರಿನನ್ವಯ ಲಿಂಗಸಗೂರು ಪೊಲೀಸರು ಹೋಟೆಲ್ ಮಾಲೀಕನ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಯಚೂರು ಜಿಲ್ಲಾಧಿಕಾರಿ ಪೂವಿತಾ ಎಸ್, ಗ್ರಾಮದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶೀಘ್ರವೇ ವಿಶೇಷ ಜಾಗೃತಿ ಶಿಬಿರ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ. ತಾಲೂಕಿನ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಸಮಾನತೆ ಕಾಯ್ದುಕೊಳ್ಳಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬೆಂಗಳೂರಿನ ಸಹಕಾರನಗರದಲ್ಲಿರುವ ಚೇರ್ಮನ್ಸ್ ಕ್ಲಬ್ ಅಡುಗೆಮನೆಯಲ್ಲಿ ೪೦ ಕೆಜಿ ಕಾಲಾವಧಿ ಮುಗಿದ ಮೆಣಸಿನಕಾಯಿ ಹಾಗೂ ತೀವ್ರ ಅಸ್ವಚ್ಛತೆ ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಅಡುಗೆಮನೆಯನ್ನು ಬಂದ್ ಮಾಡಿಸಿದೆ.