ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಹೋಬಳಿ ವ್ಯಾಪ್ತಿಯ ಎಚ್. ಹೊನ್ನೇನಹಳ್ಳಿ ಗ್ರಾಮದ ಗ್ರಾಮೀಣ ಪ್ರತಿಭೆ ಎಚ್.ಎಸ್. ಮೋಹಿತ್, ೨೦೨೬ರ ಎಫ್ಐಎಚ್ ಸೀನಿಯರ್ ಹಾಕಿ ವಿಶ್ವಕಪ್ಗೆ ಭಾರತ ರಾಷ್ಟ್ರೀಯ ತಂಡದ ಗೋಲ್ಕೀಪರ್ ಆಗಿ ನೇರವಾಗಿ ಆಯ್ಕೆಯಾಗುವ ಮೂಲಕ ತಾಲೂಕು ಹಾಗೂ ಜಿಲ್ಲೆಗೆ ಅಪಾರ ಕೀರ್ತಿ ತಂದಿದ್ದಾರೆ. ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಕ್ರೀಡಾಪಟುವಿನ ಸಾಧನೆಯನ್ನು ಶ್ಲಾಘಿಸಿದ್ದು, ಗ್ರಾಮೀಣ ಭಾಗದಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಅವರ ಶ್ರಮ ಸ್ಥಳೀಯ ಯುವಜನತೆಗೆ ಮಾದರಿಯಾಗಿದೆ ಎಂದು ಪ್ರಶಂಸಿದ್ದಾರೆ.
ಮೋಹಿತ್ ಅವರು ಈ ಹಿಂದೆ ೨೦೨೨ ಮತ್ತು ೨೦೨೩ರಲ್ಲಿ ಮಲೇಷ್ಯಾದಲ್ಲಿ ನಡೆದ ಸುಲ್ತಾನ್ ಜುವಾರ್ ಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದಿದ್ದರು. ಅಲ್ಲದೆ, ೨೦೨೩ರ ಜೂನಿಯರ್ ಏಷ್ಯಾ ಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ವರ್ಷದ ಅತ್ಯುತ್ತಮ ಗೋಲ್ಕೀಪರ್ ಪ್ರಶಸ್ತಿ ಹಾಗೂ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. ನಂತರ ೨೦೨೪ ಮತ್ತು ೨೦೨೫ರ ಹಾಕಿ ಇಂಡಿಯಾ ಲೀಗ್ನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಿ ಗಮನಾರ್ಹ ಪ್ರದರ್ಶನ ನೀಡಿದ್ದರು.
ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಸಿ.ಎನ್. ಬಾಲಕೃಷ್ಣ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ಗ್ರಾಮೀಣ ಭಾಗದ ಕ್ರೀಡಾ ವಸತಿನಿಲಯಗಳನ್ನು ಉನ್ನತೀಕರಿಸಿ ಸೂಕ್ತ ತರಬೇತಿ ಹಾಗೂ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಮೋಹಿತ್ ಅವರ ತಂದೆ ಶಶಿಕುಮಾರ್ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಹಾಗೂ ಕ್ರೀಡಾ ಪ್ರೋತ್ಸಾಹ ನೀಡಿದರೆ ಅವರೇ ದೇಶದ ಆಸ್ತಿಯಾಗುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.