ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಲ್ಲಮಜಲು ನಿವಾಸಿ ಹಾಗೂ ನಿವೃತ್ತ ಶಿಕ್ಷಕಿ ಗ್ಲಾಡಿಸ್ ಪಾಯಿಸ್ ಅವರು ದಕ್ಷಿಣ ಕೊರಿಯಾದ ಡೇಗು ನಗರದಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ 2026ರಲ್ಲಿ ಭಾರತವನ್ನು ಪ್ರತಿನಿಧಿಸಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಬಂಟ್ವಾಳ ತಾಲೂಕಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆ ತಂದಿದ್ದಾರೆ. ೭೦ ರಿಂದ ೭೫ ವರ್ಷದ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು, ಅತ್ಯುತ್ತಮ ಪ್ರದರ್ಶನ ನೀಡಿ ಕ್ರೀಡಾಲೋಕದಲ್ಲಿ ಗಮನ ಸೆಳೆದಿದ್ದಾರೆ.
ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಗ್ಲಾಡಿಸ್ ಪಾಯಿಸ್ ಅವರು ತ್ರಿಪಲ್ ಜಂಪ್ ವಿಭಾಗದಲ್ಲಿ ೬.೮೫ ಮೀಟರ್ ದೂರ ಜಿಗಿದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ತದನಂತರ ನಡೆದ ೨೦೦ ಮೀಟರ್ ಹರ್ಡಲ್ಸ್ ಸ್ಪರ್ಧೆಯನ್ನು ೪೬.೧೯ ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಶಿಕ್ಷಕಿ ವೃತ್ತಿಯಿಂದ ನಿವೃತ್ತರಾದ ಬಳಿಕ ಕ್ರೀಡೆಯಲ್ಲಿ ಸಕ್ರಿಯರಾದ ಗ್ಲಾಡಿಸ್, ಈಗಾಗಲೇ ರಾಷ್ಟ್ರೀಯ ಹಾಗೂ ಏಷ್ಯನ್ ಮಾಸ್ಟರ್ಸ್ ಕೂಟಗಳಲ್ಲಿ ನೂರಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ.
ಬಂಟ್ವಾಳದ ಪಲ್ಲಮಜಲು ಪ್ರದೇಶದ ಕ್ರೀಡಾಪಟುವಿನ ಈ ಅಪರೂಪದ ಸಾಧನೆಗೆ ಸ್ಥಳೀಯ ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳು ಮತ್ತು ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ವಯಸ್ಸು ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿರುವ ಗ್ಲಾಡಿಸ್ ಪಾಯಿಸ್ ಅವರ ಈ ಅಂತಾರಾಷ್ಟ್ರೀಯ ಜಯವು ಬಂಟ್ವಾಳ ಹಾಗೂ ಕರಾವಳಿ ಭಾಗದ ಯುವಜನತೆಗೆ ಮತ್ತು ಹಿರಿಯ ನಾಗರಿಕರಿಗೆ ಮಹತ್ತರ ಕ್ರೀಡಾ ಸ್ಪೂರ್ತಿಯನ್ನು ನೀಡಿದೆ.