ಹುಣಸೂರು ನಗರದ ತಾಲೂಕು ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸ್ಥಳೀಯ ಸಂತ ಜೋಸೆಫರ ಪಿಯು ಕಾಲೇಜಿನ ಬಾಲಕಿಯರ ತಂಡವು ಭರ್ಜರಿ ಪ್ರದರ್ಶನ ನೀಡುವ ಮೂಲಕ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಅಥ್ಲೆಟಿಕ್ಸ್ ಮತ್ತು ಮೈದಾನ ಸ್ಪರ್ಧೆಗಳಲ್ಲಿ ಸತತ ಯಶಸ್ಸು ಕಂಡಿದ್ದಾರೆ. ಬಾಲಕಿಯರ ಅಥ್ಲೆಟಿಕ್ಸ್ ವಿಭಾಗದ 100 ಮೀಟರ್ ಮತ್ತು 200 ಮೀಟರ್ ಓಟದ ಸ್ಪರ್ಧೆಗಳಲ್ಲಿ ಹಂಸಪ್ರಿಯ ಪ್ರಥಮ ಸ್ಥಾನ ಪಡೆದರು. 3000 ಮೀಟರ್ ಓಟದಲ್ಲಿ ಧನುಜಾ ಪ್ರಥಮ ಹಾಗೂ ನಳಿನಿ ದ್ವಿತೀಯ ಸ್ಥಾನ ಪಡೆದರು. 1500 ಮೀಟರ್ ಓಟದಲ್ಲಿ ಅಶ್ವಿನಿ ದ್ವಿತೀಯ, 800 ಮೀಟರ್ ಓಟದಲ್ಲಿ ಆಶಾ ತೃತೀಯ ಹಾಗೂ 400 ಮೀಟರ್ ಓಟದಲ್ಲಿ ಸಿಂಚನಾ ದ್ವಿತೀಯ ಸ್ಥಾನ ಗಳಿಸಿದರು.
ಮೈದಾನ ಸ್ಪರ್ಧೆಗಳ ಪೈಕಿ ಉದ್ದ ಜಿಗಿತ ಮತ್ತು ಎತ್ತರ ಜಿಗಿತದಲ್ಲಿ ಡಿ. ಅನನ್ಯಾ ತೃತೀಯ ಸ್ಥಾನ ಗಳಿಸಿದರೆ, ಗುಂಡು ಎಸೆತ ಹಾಗೂ ತಟ್ಟೆ ಎಸೆತ (ಡಿಸ್ಕಸ್ ಥ್ರೋ) ಎರಡರಲ್ಲೂ ತನುಶ್ರೀ ತೃತೀಯ ಸ್ಥಾನ ಪಡೆದರು. ಜೊತೆಗೆ 4x100 ಮೀಟರ್ ರಿಲೇಯಲ್ಲಿ ಕಾಲೇಜಿನ ತಂಡ ಪ್ರಥಮ ಹಾಗೂ 4x400 ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಗಳಿಸಿತು. ಕ್ರೀಡಾಪಟುಗಳ ಈ ಅದ್ಭುತ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಅಧ್ಯಾಪಕ ವೃಂದದವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.