ಬೆಂಗಳೂರು ನಗರದ ಮಿನರ್ವಾ ಸರ್ಕಲ್ ಬಳಿ ಇರುವ ಕೃಪಾ ಹೆಲ್ತ್ಕೇರ್ ಕೇಂದ್ರದ ಮೇಲೆ ವಿಶೇಷ ತನಿಖಾ ತಂಡ (ಎಸ್ಐಟಿ) ಮತ್ತು ಕರ್ನಾಟಕ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ, ಬೃಹತ್ ನಕಲಿ ಔಷಧ ಜಾಲವನ್ನು ಭೇದಿಸಿದ್ದಾರೆ. ಈ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಫಾರ್ಮಸಿಯ ಮಾಲೀಕ ವೀರೇಶ್ ಕುಮಾರ್ ಜೈನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅವಧಿ ಮುಗಿದ ಮತ್ತು ಕಡಿಮೆ ಬೆಲೆಯ ಔಷಧಗಳಿಗೆ ಪ್ರಮುಖ ಫಾರ್ಮಾ ಕಂಪನಿಗಳ ನಕಲಿ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಬೆಂಗಳೂರು ನಗರದ 90ಕ್ಕೂ ಹೆಚ್ಚು ಆಸ್ಪತ್ರೆಗಳು ಹಾಗೂ ಕ್ಲಿನಿಕ್ಗಳಿಗೆ ಸುಮಾರು ಶೇಕಡಾ 50 ರಷ್ಟು ರಿಯಾಯಿತಿ ದರದಲ್ಲಿ ಈ ನಕಲಿ ಕ್ಯಾನ್ಸರ್ ಔಷಧಗಳು, ಜೀವ ರಕ್ಷಕ ಮದ್ದುಗಳು ಮತ್ತು ಐಸಿಯು ಇಂಜೆಕ್ಷನ್ಗಳನ್ನು ಪೂರೈಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಕಲಿ ಲೇಬಲ್ಗಳನ್ನು ಬಳಸಿ ಹಳೆಯ ಔಷಧಗಳನ್ನು ಹೊಸ ಬಾಟಲಿಗಳಿಗೆ ತುಂಬಿಸಿ ಮಾರಾಟ ಮಾಡುವ ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣವು ಕರ್ನಾಟಕ ಸೇರಿದಂತೆ ಹರಿಯಾಣ, ಹಿಮಾಚಲ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹರಡಿರುವ ವಿಸ್ತಾರವಾದ ಜಾಲದ ಭಾಗವಾಗಿದೆ. ಈ ಹಿಂದೆ ರಾಮನಗರ ಜಿಲ್ಲೆಯ ಫಾರ್ಮ್ಹೌಸ್ ಒಂದರಲ್ಲಿ ನಕಲಿ ಔಷಧ ತಯಾರಿಕೆ ಘಟಕ ಪತ್ತೆಯಾದ ನಂತರ ಆರೋಗ್ಯ ಇಲಾಖೆ ಎಸ್ಐಟಿ ತನಿಖೆಗೆ ಆದೇಶಿಸಿತ್ತು. ಪ್ರಸ್ತುತ ಎಸ್ಐಟಿ ಬ್ಯಾಂಕ್ ವ್ಯವಹಾರ ದಾಖಲೆಗಳು ಹಾಗೂ ಮಳಿಗೆಯ ಸೀಜ್ ಮಾಡಿದ ಬಿಲ್ಗಳನ್ನು ಪರಿಶೀಲಿಸುತ್ತಿದ್ದು, ಹಣಕಾಸು ಜಾಲದ ತನಿಖೆ ತೀವ್ರಗೊಳಿಸಿದೆ.